ಯೋಗ -
ಯೋಗ ಜೀವನದ ಕಲೆ ಮತ್ತು ವಿಜ್ಞಾನ. ಇಂದು ಯೋಗದ ಜಾಗೃತಿ ಅಪಾರ. ಯೋಗದ ಕುರಿತ ವ್ಯಾಖ್ಯಾನಗಳು ಅಸಂಖ್ಯ. ಪತಂಜಲಿ ಮುನಿಗಳು ಯೋಗದ ಕುರಿತು ನಿಸ್ಸಂದಿಗ್ಧವಾಗಿ, ನಿಖರವಾಗಿ 196 ಸೂತ್ರಗಳಲ್ಲಿ ವಿಶ್ಲೇಷಿಸಿದ್ದಾರೆ. ಅವರ ದೃಷ್ಟಿಯಲ್ಲಿ ಯೋಗವೆಂದರೆ ಚಿತ್ತವೃತ್ತಿ ನಿರೋಧ.

“ಯೋಗಃ ಚಿತ್ತವೃತ್ತಿ ನಿರೋಧಃ”

ಮೂರೇ ಪದಗಳಲ್ಲಿ ಯೋಗದ ನಿರ್ದಿಷ್ಟ ಲಕ್ಷಣವನ್ನು ತಿಳಿಸಿರುವುದು ಪತಂಜಲಿಗಳ ಅರಿವಿನ ಆಳಕ್ಕೆ ಸ್ಪಷ್ಟ ನಿದರ್ಶನ. ಜ್ಞಾನ ಆಳವಾದಷ್ಟೂ ಭಾಷೆ ಸಂಕ್ಷಿಪ್ತ. ಚಿತ್ತ ಎಂದರೆ ಮನಸ್ಸು. ವೃತ್ತಿ ಎಂದರೆ ಮನಸ್ಸಿನಲ್ಲೇಳುವ ಆಲೋಚನಾ ತರಂಗಗಳು, ಗೊಂದಲಗಳು, ತಳಮಳ ಇತ್ಯಾದಿ. ಪತಂಜಲಿಗಳು ಬಳಸಿರುವ ಮತ್ತೊಂದು ಶಬ್ಧ - ನಿರೋಧಃ. ಬಹಳ ವಿಶಿಷ್ಟವಾದುದು. ನಿರೋಧಃ ಎಂಬುದು ನಿಯಂತ್ರಣಕ್ಕಿಂತ ವಿಭಿನ್ನವಾದುದು. ನಿಯಂತ್ರಣವೆಂದರೆ ಒಂದು ವ್ಯವಸ್ಥೆಯಲ್ಲಾಗುವ ಬದಲಾವಣೆಗಳನ್ನು ಹಿಡಿತಕ್ಕೆ ತಂದು ಮತ್ತೆ ವ್ಯವಸ್ಥೆಯ ಸಮತೋಲವನ್ನು ಕಾಯ್ದುಕೊಳ್ಳುವುದು. ನಿರೋಧವೆಂದರೆ ವ್ಯವಸ್ಥೆಯ ಸಮತೋಲನವು ಬದಲಾವಣೆಗಳಿಗೆ ಸ್ಪಂದಿಸದೇ ಇರುವುದು. ಅಂದರೆ, ಮನಸ್ಸಿನಲ್ಲೆದ್ದ ಆಲೋಚನೆಗಳನ್ನು ಅಡಗಿಸುವುದು ಯೋಗ ಅಲ್ಲ; ಆಲೋಚನೆಗಳೇ ಏಳದಂತಹ ನಿರೋಧ ಸ್ಥಿತಿಯೇ ಯೋಗ.

ಚಿತ್ತದಲ್ಲಿ ಏಳುವ ವೃತ್ತಿಗಳ ಸಂಖ್ಯೆ ಅಪಾರ. ಆದರೂ ಅವುಗಳನ್ನು ಐದು ವಿಭಾಗಗಳಾಗಿ ವಿಂಗಡಿಸಿರುವುದು ಪತಂಜಲಿಗಳ ವೈಜ್ಞಾನಿಕ ಮನೋಭಾವಕ್ಕೆ ಸಾಕ್ಷಿ. ಮನಸ್ಸಿನಲ್ಲೇಳುವ ಐದು ವೃತ್ತಿಗಳು ಸುಖವನ್ನು ಅಥವಾ ದುಃಖವನ್ನು ನೀಡಬಹುದಾಗಿದೆ.
	“ವೃತ್ತಯಃ ಪಂಚತಯ್ಯಾ ಕ್ಲಿಷ್ಟಾಕ್ಲಿಷ್ಟಾಃ”
	ಈ ಐದು ವೃತ್ತಿಗಳೆಂದರೆ
	“ಪ್ರಮಾಣ ವಿಪರ್ಯಯ ವಿಕಲ್ಪ ನಿದ್ರಾ ಸ್ಮøತಯಃ”
ಒಂದು ವಸ್ತು ಅಥವಾ ವಿಷಯವನ್ನು ಅದು ಇರುವ ಹಾಗೆಯೇ ತಿಳಿದುಕೊಳ್ಳುವ ವೃತ್ತಿಯೇ ಪ್ರಮಾಣ ವೃತ್ತಿ; ಇರುವುದೇ ಬೇರೆ ತಿಳಿದುಕೊಳ್ಳುವುದೇ ಬೇರೆ — ಇದು ವಿಪರ್ಯಯ ವೃತ್ತಿ; ವಸ್ತು / ವಿಷಯಗಳ ವಾಸ್ತವ ಆಧಾರವಿಲ್ಲದೆ ಕಲ್ಪಿಸಿಕೊಳ್ಳುವ ವೃತ್ತಿಯೇ ವಿಕಲ್ಪ; ಯೋಚನಾತರಂಗಗಳ ಮತ್ತು ಬುದ್ಧಿಯ ಅಪ್ರಯತ್ನಪೂರ್ವಕ ಅನುಪಸ್ಥಿತಿಯೇ ನಿದ್ರಾವೃತ್ತಿ ಮತ್ತು ಹಳೆಯದನ್ನು ನೆನಪಿಸಿಕೊಳ್ಳುವುದೇ ಸ್ಮøತಿ ವೃತ್ತಿ. ಈ ಐದೂ ವೃತ್ತಿಗಳಿಂದ ಮುಕ್ತವಾದ ಚಿತ್ತದ ನಿರೋಧಾವಸ್ಥೆಯೇ ಯೋಗ. ಇಂತಹ ಯೋಗ ಸ್ಥಿತಿಯನ್ನು ತಲುಪಿರುವ ಸಾಧಕನ ಲಕ್ಷಣವನ್ನು ಪತಂಜಲಿಗಳು ನಿಖರವಾಗಿ ನಿರೂಪಿಸಿದ್ದಾರೆ.

“ತದಾದೃಷ್ಟುಃ ಸ್ವರೂಪೇವಸ್ಥಾನಮ್”

ಅಂದರೆ ಚಿತ್ತದ ನಿರೋಧಾವಸ್ಥೆ ತಲುಪಿದಾಗ ಸಾಧಕನು ತನ್ನ ನಿಜಸ್ವರೂಪದಲ್ಲಿ ನೆಲೆಸಿರುತ್ತಾನೆ. ಇದೇ ಸಾಕ್ಷಾತ್ಕಾರ. ಇಂತಹ ಉತ್ಕøಷ್ಟ ಅವಸ್ಥೆಯನ್ನು ತಲುಪಲು ಅನುಸರಿಸಬೇಕಾದ ಮಾರ್ಗವನ್ನೂ ಪತಂಜಲಿಗಳು ಸ್ಪಷ್ಟವಾಗಿ ಗುರುತಸಿದ್ದಾರೆ.

“ಅಭ್ಯಾಸ ವೈರಾಗ್ಯಾಭ್ಯಾಂ ತನ್ನಿರೋಧಃ”

ಮನಸ್ಸಿನ ನಿರೋಧಾವಸ್ಥೆಗೆ ಅಭ್ಯಾಸ ಮತ್ತು ವೈರಾಗ್ಯಗಳೇ ಅಡಿಪಾಯ. ಅಭ್ಯಾಸವೆಂದರೆ ದೀರ್ಘಕಾಲೀನವಾದ, ನಿರಂತರವಾದ ಮತ್ತು ಉತ್ಸಾಹಯುಕ್ತವಾದ ಪರಿಶ್ರಮ - ಸಾಧನೆ. ವೈರಾಗ್ಯವೆಂದರೆ ಕಂಡ / ಕೇಳಿದ ವಿಷಯ ಭೋಗಗಳಲ್ಲಿ ಆಸಕ್ತನಾಗದೆ ಮುಕ್ತನಾಗಿರುವುದು. ಅಭ್ಯಾಸ ಮತ್ತು ವೈರಾಗ್ಯಗಳು ಒಂದು ಬಂಡಿಯ ಚಕ್ರಗಳಿದ್ದಂತೆ - ಸಾಧನೆಗೆ ಎರಡೂ ಅನಿವಾರ್ಯ. ಇಂತಹ ತಳಹದಿಯ ಮೇಲೆ ಯೋಗದ ಪರಾಕಾಷ್ಠೆಯನ್ನು ತಲುಪಲು ಅನುವಾಗುವಂತಹ ವ್ಯಕ್ತಿತ್ವ ನಿರ್ಮಾಣಕ್ಕೆ ಪತಂಜಲಿಗಳು ನಿರೂಪಿಸಿರುವ ವೈಜ್ಞಾನಿಕ ವಿಧಾನವೇ ಅಷ್ಟಾಂಗ ಯೋಗ. ಅಷ್ಟಾಂಗ ಯೋಗವೆಂದರೆ ಎಂಟು ಅಂಗಗಳುಳ್ಳ ಯೋಗ. ಅವುಗಳೆಂದರೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ದ್ಯಾನ, ಸಮಾಧಿ, ಅಹಿಂಸೆ, ಸತ್ಯ, ಅನ್ಯರ ವಸ್ತುಗಳನ್ನು ಬಯಸದಿರುವುದು, ಹಿತ ಮಿತವಾದ ಜೀವನ, ಅಗತ್ಯಕ್ಕಿಂತ ಹೆಚ್ಚಿನದನ್ನು ಶೇಖರಿಸದಿರುವುದೇ ಯಮ. ಮಾನಸಿಕ ಮತ್ತು ದೈಹಿಕ ಶುದ್ಧತೆ, ಸಂತೋಷ — ತೃಪ್ತಿ, ತಪಸ್ಸು - ಸಾಧನೆ, ತನ್ನ ಅರಿಯುವಿಕೆ ಮತ್ತು ಅಹಂ ವರ್ಜಿಸುವುದು ನಿಯಮ. ದೇಹ ಮತ್ತು ಮನಸ್ಸಿನ ಸ್ಥಿರತೆ ಹಾಗು ಸುಖವನ್ನು ಕಾಯ್ದುಕೊಳ್ಳುವ ಭಂಗಿಯೇ ಆಸನ. ಕ್ರಮಬದ್ಧ ಉಸಿರಾಟವೇ ಪ್ರಾಣಾಯಾಮ. ಇಂದ್ರಿಯಗಳನ್ನು ಒಳಮುಖವಾಗಿರಿಸುವುದೇ ಪ್ರತ್ಯಾಹಾರ. ಏಕಾಗ್ರತೆಯೇ ಧಾರಣ. ವಸ್ತು / ವಿಷಯದಲ್ಲಿ ಮನಸ್ಸು ತಲ್ಲೀನವಾಗುವುದೇ ಧ್ಯಾನ. ವಸ್ತು / ವಿಷಯ ಮತ್ತು ಸಾಧಕ ಎಂಬ ಭಿನ್ನ ಭಾವಗಳು ಅಳಿಯುವುದೇ ಸಮಾಧಿ — ಯೋಗ ಸ್ಥಿತಿ.
		
ಡಾ|| ಸು.ನ. ಓಂಕಾರ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ